ದಿನಕ್ಕೊಂದು ಕಥೆ

🌏🌏ದಿನಕ್ಕೊಂದು ಕಥೆ

🌅🌅ಕಾಡಿನ ಮರದ ಮಳೆಯ ನೀರುಂಡು ಬೆಳೆದ ಹನುಮಂತಪ್ಪ

ಅಂದು ಪೇಪರಿನಲ್ಲಿ ಹತ್ತನೆಯ ತರಗತಿ ಫಲಿತಾಂಶ ಪ್ರಕಟವಾಗಿತ್ತು. ಅದರಲ್ಲಿ ರ್ಯಂಕ್ ವಿಜೇತರ ಪಟ್ಟಿ ಪ್ರಕಟವಾಗಿತ್ತು. ಹೆಚ್ಚಿನ ಪಾಲು ಹುಡುಗಿಯರೇ ಇರುವುದ ನೋಡಿ, ನನ್ನ ಹೃದಯ ಹೆಮ್ಮೆಯಿಂದ ಬೀಗಿತು. ಒಂದು ಕಾಲದಲ್ಲಿ ಅಲ್ಲಿ, ಇಲ್ಲಿ ಕೆಲವು ಹುಡುಗಿಯರು ಓದುತ್ತಿದ್ದರು. ಈಗ ಯಶಸ್ಸಿನ ಸಿಂಹಪಾಲು ಹುಡುಗಿಯರದ್ದೇ ಆಗಿದೆ. ಏಕಾಗ್ರತೆ, ನಿಷ್ಠೆಯಲ್ಲಿ ಹುಡುಗಿಯರು ಅಗ್ರಗಣ್ಯರೆಂದೇ ನನ್ನ ನಂಬಿಕೆ.

ಅಂದಿನ ಫಲಿತಾಂಶದಲ್ಲಿ ಮೊದಲ ರ‍್ಯಾಂಕ್‌ ವಿದ್ಯಾರ್ಥಿಯ ಹೆಸರು ‘ಹನುಮಂತಪ್ಪ’ ಎಂದು ಇತ್ತು. ಆತನ ಸಂದರ್ಶನವೂ ಪ್ರಕಟವಾಗಿತ್ತು. ಅದರಲ್ಲಿ ಆತನ ತಾಯಿ, ತಂದೆ ಕೂಲಿ ಕೆಲಸ ಮಾಡುತ್ತಿದ್ದು, ಇವನು ಶಾಲೆಗೆ ಹೋಗಿ ಬಂದ ನಂತರ ಸಂಜೆ ತಂದೆ ತಾಯಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ. ಅವನ ಮನೆಯಲ್ಲಿ ಇವನಲ್ಲದೆ ಮೂರರಿಂದ ನಾಲ್ಕು ಜನ ತಮ್ಮ ತಂಗಿಯರು. ‘ನನಗೆ ಯಾರಾದರೂ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ ಖಂಡಿತವಾಗಿ ಮುಂದೆ ಓದ ಬಯಸುತ್ತೇನೆ. ಬಳ್ಳಾರಿ ನಮ್ಮ ಹಳ್ಳಿಗೆ ಹತ್ತಿರ, ಅಲ್ಲಿ ರೂಮು ಓದಿಸುವಷ್ಟು ನನ್ನ ತಂದೆ ತಾಯಿಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಅಷ್ಟೊಂದು ಹಣವೂ ಇಲ್ಲ’ ಎಂದು ಹೇಳಿದ್ದ.

ಕೆಲವರು ಟ್ಯೂಷನ್ ಹೇಳಿಸುವುದಷ್ಟೇ ಅಲ್ಲ, ಮನೆಯಲ್ಲಿ ಅಮ್ಮಂದಿರು ಸ್ವತಃ ತಾವೇ ಬೇಗ ಎದ್ದು, ಕಾಫಿ ಮಾಡಿ ಮಕ್ಕಳಿಗೆ ಓದಲು ಕೂರಿಸುತ್ತಾರೆ. ಇನ್ನು ಕೆಲವು ಪೋಷಕರು ಮಕ್ಕಳನ್ನು ಸ್ಕೂಟರ್, ಕಾರ್‌ನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುತ್ತಾರೆ. ಆದರೆ ಇಂಥವರ ಮಕ್ಕಳಿಗೆ ವಿದ್ಯಾಭ್ಯಾಸದ ಮೇಲೆ ಎಷ್ಟು ಆಸಕ್ತಿ, ಪ್ರೀತಿ ಇರುತ್ತದೆ ? ತಂದೆತಾಯಿಯರ ಕಣ್ಣು ಸಿನಿಮಾಕ್ಕೆ ಹೋಗಿ, ಟ್ಯೂಷನ್‌ಗೆ ಹೋಗಿದ್ದೆ ಎಂದು ಸುಳ್ಳು ಹೇಳುವ ಮಕ್ಕಳೇ ಹೆಚ್ಚು. ಮಕ್ಕಳ ಜತೆ ಕುಳಿತು ಪ್ರಾಜೆಕ್ಟ್ ವರ್ಕ್ ಮಾಡಿಸುವ, ಹೋಮ್ ವರ್ಕ್ ಮಾಡಿಸುವ ಪೋಷಕರನ್ನು ನೋಡಿದ್ದೇವೆ. ಪರೀಕ್ಷೆಯ ದಿನ ಗುಡಿಯನ್ನು ಸುತ್ತುವ, ತಮ್ಮದೇ ಪರೀಕ್ಷೆಯೇನೋ ಎಂದು ಟೆನ್ಶನ್ ಮಾಡಿಕೊಳ್ಳುವ ತಂದೆ ನಮಗೆ ಕಾಣುತ್ತಾರೆ.

ಇಲ್ಲಿ ಕಾಡಿನ ಮರದಲ್ಲಿ ಮಳೆಯ ನೀರನ್ನು ಉಂಡು, ಸೊಂಪಾಗಿ ಬೆಳೆದಂತೆ ಹನುಮಂತಪ್ಪನಿದ್ದಾನೆ. ಕೇವಲ ತನ್ನ ಸಾಮರ್ಥ್ಯದಿಂದ ಮುಂದೆ ಬಂದಿದ್ದ. ಈ ಹುಡುಗನನ್ನು ಒಮ್ಮೆಯಾದರೂ  ಇವನನ್ನು ಕರೆಸಬೇಕೆಂದರೆ ಮೊದಲು ಬಸ್‌ಚಾರ್ಜ್ ಕೊಡಬೇಕು. ಇಲ್ಲವಾದರೆ ಹೇಗೆ ಬಂದಾನು ? ಅನಿಸಿತು. ಅವನ ವಿಳಾಸ ಪತ್ರಿಕೆಯಿಂದ ಪಡೆದು ನಾನು ಹಣ ಎಂ.ಓ. ಮಾಡಿ, ನನ್ನನ್ನು ಭೇಟಿಯಾಗಲು ಬರಬೇಕೆಂದು ವಿಳಾಸ ಕೊಟ್ಟೆ.

ಹನುಮಂತಪ್ಪನನ್ನು ನೋಡಿದಾಗ ಅಚ್ಚರಿಯೇ ಆಯಿತು. ತೆಳ್ಳಗೆ, ಕುಳ್ಳಗೆ ಇದ್ದ ಆತನ ಕಣ್ಣುಗಳು ಕಾಂತಿಯುತವಾಗಿದ್ದವು. ಮಾತು ಕಡಿಮೆ, ಅಲ್ಲದೇ ತುಂಬಾ ಸಂಕೋಚದ ಸ್ವಭಾವದವನು ಎನ್ನುವುದೂ ತಿಳಿಯಿತು. ನಾನು ಅವನನ್ನು ಕೂರಿಸಿಕೊಂಡು ನಿಧಾನವಾಗಿ ‘ನೀನು ಹಣದ ತೊಂದರೆಯಿಂದ ಯಾವುದೇ ನಿಲ್ಲಿಸಬೇಡ. ಸಂಪೂರ್ಣ ಜವಾಬ್ದಾರಿಯನ್ನು ನಾವು ಹೊರುತ್ತೇವೆ. ಹಾಸ್ಟೆಲ್ ಫೀಸ್ ಸಹಿತ ಕೊಡುತ್ತೇವೆ.’ ಎಂದು ಹೇಳಿದೆ. ಸ್ವಲ್ಪ ಹೊತ್ತು ಅನುಮಾನಿಸಿದ ನಂತರ ಅವನು- ‘ ಮೇಡಂ, ನನಗೆ ಶಿಕ್ಷಕನಾಗಲು ಬಹಳ ಆಸೆ. ಶಿಕ್ಷಕನಾದ ನಂತರ ನನ್ನಂಥ ಅನೇಕ ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಬಹುದು, ಮಾರ್ಗದರ್ಶನ ಮಾಡಬಹುದು. ನನಗೆ ದುಡ್ಡು ಮುಖ್ಯವಲ್ಲ ಇದೇ ನನ್ನ ಆಸೆ’ ಎಂದ.

‘ಸರಿ, ನೀನು ಹಾಸ್ಟೆಲ್‌ನಲ್ಲಿದ್ದರೆ ಎಷ್ಟು ಖರ್ಚು ಬರಬಹುದು ತಿಳಿಸು. ಪ್ರತಿ ಮೂರು ತಿಂಗಳಿಗೆ ನಾವು Advance ಕೊಡುತ್ತೇವೆ. ಬೇಕಾದರೆ ಒಂದು ವರ್ಷದ ಖರ್ಚು ಸಂಪೂರ್ಣ ಕೊಡುತ್ತೇವೆ’ ಎಂದೆ. ಅವನು ಮತ್ತೆ ಸ್ವಲ್ಪ ಸಮಯ ಮೌನಿಯಾದ. ‘ಮೇಡಂ, ನಾನು ಹಾಸ್ಟೆಲ್‌ನಲ್ಲಿ ಇರೋದಿಲ್ಲ, ರೂಮು ಮಾಡಿಕೊಂಡು ಅಡುಗೆ ಮಾಡಿಕೊಂಡು ಇರುತ್ತೇನೆ. ನನಗೆ ಅದೇ ಹೆಚ್ಚು ಅನುಕೂಲ. ಹಾಸ್ಟೆಲ್‌ನಲ್ಲಿ ಹೆಚ್ಚು ಗದ್ದಲವಿರುತ್ತದೆ. ಸುಮ್ಮನೇ ಕಾಲಹರಣವಾಗುತ್ತದೆ. ಓದಲು ಆಗುವುದಿಲ್ಲ’ ಎಂದನು. ಊರಿನಲ್ಲಿ ಮನೆಯಿದ್ದರೂ, ಕಾಲೇಜ್ ಇದ್ದರೂ ಹಾಸ್ಟೆಲ್ ಜೀವನ ಎಂದರೆ ಸುಂದರ, ಮಜ ಎನ್ನುವ ಈಗಿನ ಕಾಲದಲ್ಲಿ ಈ ಹನುಮಂತಪ್ಪ. ಹನುಮಂತಪ್ಪ ಬಳ್ಳಾರಿಗೆ ಹೋದ ನಂತರ ಪ್ರತಿ ಮೂರು ತಿಂಗಳಿಗೆ ನಾವು ಹಣ ಕಳುಹಿಸುತ್ತಿದ್ದೆವು. ಹೀಗೆ ಆರು ತಿಂಗಳ ಕಳೆದವು. ಅವನ Progrensreport ನಮಗೆ ಬರುತ್ತಿತ್ತು. ಮೂರನೇ ಟರ್ಮಿನ ಹಣ ಕಳಿಸಬೇಕು ಎನ್ನುವಾಗ ಹನುಮಂತಪ್ಪನ ಸುಂದರವಾದ ಕೈಬರಹದ ಕಾಗದ ಬಂದಿತು.

‘ಮೇಡಂ, ಈ ಟರ್ಮ್ ಹಣ ಕಳಿಸಬೇಡಿ. ಕಳೆದ ತಿಂಗಳು Strike ಇದ್ದ ಕಾರಣ ನಮ್ಮ ಕಾಲೇಜ್ ಮುಚ್ಚಿತ್ತು. ಆಗ ನಾನು ಊರಲ್ಲಿ ಇದ್ದೆ. ದಿನಸಿ ಸಾಮಾನು ಹಾಗೇ ಅಲ್ಲದೇ ರೂಮು ಬಾಡಿಗೆ ಮಾತ್ರ ಕೊಡಬೇಕು. ದಿನಸಿಯ ಲೆಕ್ಕ ಹಿಡಿದರೂ ನನಗೆ ಈಗ ಹಣ ಬೇಡ. ಹೋದ ತಿಂಗಳು ಮಿಕ್ಕಿದ್ದರಲ್ಲಿಯೇ ಹೊಂದಿಸಿಕೊಳ್ಳುತ್ತೇನೆ. ಹಣ ಬೇಕಾದಾಗ ಕೇಳುತ್ತೇನೆ. ಈಗ ಸಧ್ಯ ಬೇಡ’ ಎಂದನು.

ಪತ್ರದ ಒಕ್ಕಣಿಕೆ ನೋಡಿ ನಾನು ಅಚ್ಚರಿಗೊಂಡೆ. ಇದು ಸಾಧ್ಯವೇ ಎನಿಸಿತು. ಈಗಿನ ಕಾಲದಲ್ಲಿ ಯಾರಾದರೂ ಹೀಗೆ ಬರೆಯಲು ಸಾಧ್ಯವೇ ? ನಮ್ಮ ಮನದ ನಿಷ್ಠೆ ಹಣದ ಮುಂದೆ ಕಾಲೂರಿ ಕೆಳಗೆ ಬಿದ್ದ ಸಮಯದಲ್ಲಿ ಇದೊಂದು ಪವಾಡವೇ  ಹನುಮಂತಪ್ಪ ನನಗೆ ಕಾಗದ ಬರೆದು ಖರ್ಚು ಹೆಚ್ಚಾಗಿದೆ, ಈ ತಿಂಗಳು ಇನ್ನು 200 ರು. ಹೆಚ್ಚು ಬೇಕೆಂದರೂ ನಾನು ಕಳಿಸುತ್ತಿದ್ದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ತನ್ನ ಸ್ಕಾಲರ್‌ಶಿಪ್ ಹಣ ಕಡಿಮೆ ಕೇಳಿದ್ದಾನೆ ! ಅವನು ಸಿರಿವಂತನಲ್ಲ ಆದರೆ ಅವನ ಹೃದಯ ಸಿರಿವಂತಿಕೆ, ಪ್ರಾಮಾಣಿಕತೆಯ ಮುಂದೆ ಹಣ ಬಹಳ ಗೌಣವಾಗಿತ್ತು. ಈ ಪ್ರಾಮಾಣಿಕತೆ ಯಾವುದೇ ಶಾಲೆ, ಕಾಲೇಜಿನಲ್ಲಿ ಕಲಿಸುವಂಥದ್ದಲ್ಲ. ಅದು ಸಂಸ್ಕಾರದಿಂದ, ಹೃದಯದ ಆಳದಿಂದ ಬರುವಂಥದ್ದು. ಹನುಮಂತಪ್ಪ ಕಡು ಬಡವನಾದರೂ ಸಿರಿವಂತನಾಗಿದ್ದ. ಅವನ ಉದಾಹರಣೆಯನ್ನು ನಾನು ಅನೇಕರಿಗೆ ಅನೇಕಸಲ ಹೇಳಿದ್ದೇನೆ. ನನ್ನ ಸಾರ್ವಜನಿಕ ಜೀವನದಲ್ಲಿ ಕಂಡ ಮಿನುಗುವ ತಾರೆಯಲ್ಲಿ ಇವನೂ ಒಬ್ಬನು.

ಕೃಪೆ :ಸುಧಾ ಮೂರ್ತಿ
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

Quiz Questions ರಸಪ್ರಶ್ನೆ ಕಾರ್ಯಕ್ರಮ

ಅಣುಗಳು ರಾಸಾಯನಿಕ ಹೆಸರುಗಳು (ವಿಜ್ಞಾನ)

2020-21 ಪಠ್ಯಪುಸ್ತಕಗಳು ಡೌನ್ಲೋಡ್ ಮಾಡಿಕೊಳ್ಳಿ